ಶಿಖರ ತೈಲಾಭಿಷೇಕ

 ಶಿಖರ ತೈಲಾಭಿಷೇಕ: ಏಷ್ಯಾಖಂಡದ ಅಚ್ಚರಿ

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ವೀರಶೈವ ಧರ‍್ಮವು ಜಾತಿ ಪದ್ಧತಿಯನ್ನು ಖಂಡಿಸುತ್ತಲೇ ಸತ್ವಯುತವಾದ ಮಾನವನ ಆಧ್ಯಾತ್ಮಿಕ ಸಾಧನೆಗಾಗಿ ಅನೇಕ ಆಚರಣೆಗಳನ್ನು ವಿಧಿವತ್ತಾಗಿ ನಿರೂಪಿಸಿತು. ವೀರಶೈವ ಧರ್ಮದ ಪ್ರಚಾರ ಕಾರ್ಯವು ಈ ಸರಳ ಆಚರಣೆಗಳ ಮೂಲಕ ನಡೆದು ಭಾರತದ ಹಲ ಕೆಲವು ಪ್ರದೇಶವನ್ನು ವ್ಯಾಪಿಸಿತು. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಉಜ್ಜಯಿನಿ, ಚಿಕ್ಕಮಂಗಳೂರಿನ ಬಾಳೆಹೊನ್ನೂರು, ಆಂಧ್ರಪ್ರದೇಶದ ಶ್ರೀಶೈಲ, ಉತ್ತರ ಪ್ರದೇಶದ ಕೇದಾರ ಮತ್ತು ಕಾಶೀ ಕ್ಷೇತ್ರಗಳಲ್ಲಿ ತನ್ನ ಖಚಿತತೆಯ ಅಸ್ತಿಭಾರವನ್ನು ನೆಲೆಗೊಳಿಸಿಕೊಂಡಿತು. ನಿತ್ಯವೂ ವೀರಶೈವ ಧರ‍್ಮದ ವಿಧಿ-ವಿಧಾನಗಳನ್ನು ಪರಿಪಾಲಿಸುತ್ತಾ ಜನರ ಅಂತರಂಗ ಮತ್ತು ಬಹಿರಂಗದ ಶುದ್ಧಿಗೆ ಬೋಧಪ್ರದವಾಗಿ ಕೊಡುಗೆ ನೀಡಿರುವ ಶ್ರೀಕ್ಷೇತ್ರ ಉಜ್ಜಯಿನಿ ಐತಿಹಾಸಿಕ ಕೇಂದ್ರ.



ವಿಜಯನಗರದ ಅರಸ ಕ್ರಷ್ಣರಾಯರಿಗೆ (ಕೃಷ್ಣದೇವರಾಯ) (ಕರ್ನಾಟಕದ ಕೈಫಿಯತ್ತುಗಳು) ಪಟ್ಟಕಟ್ಟಿದ ನಂತರ ರಾಜ್ಯದಲ್ಲಿನ ಪಾಳೆಗಾರರನ್ನು ಕರೆಯಿಸಿ ಸನ್ಮಾನ ಮಾಡುವಾಗ ಕುಮಾರರಾಮನ ವಂಶಸ್ಥನಾದ ಬೊಮ್ಮಂತರಾಜ ಮರಳನ ಪಾಳೆಯಗಾರನಿಗೆ ಸನ್ಮಾನ ಮಾಡುತ್ತಾರೆ. ಆಗ ಬೊಮ್ಮಂತರಾಜನು ‘ನಮಗೆ ಈ ಹಿಂದೆ ಕೊಟ್ಟಿರುವ ನಾಡ ದಳವಾರಿಕೆಯೇ ಇರಲಿ ಇನ್ನೇನು ಬೇಡ’ ಎನ್ನುತ್ತಾನೆ. ಅದಕ್ಕೆ ಕ್ರಿ(ಕೃ)ಷ್ಣರಾಯರು ಸಂತೋಷಪಟ್ಟು ಏಳು ತಾಲ್ಲೂಕುಗಳನ್ನು ದಯಪಾಲಿಸುತ್ತಾರೆ. ಬೊಮ್ಮಂತ ರಾಜನು ಆ ಏಳು ತಾಲೂಕುಗಳನ್ನು ತನ್ನ ದಳವಾರಿಕೆಯಲ್ಲಿ ಆಡಳಿತ ನಡೆಸುತ್ತಿರುತ್ತಾನೆ. ಅವನಿಗೆ ಮಕ್ಕಳಿಲ್ಲದ ಕೊರಗು ಕಾಡುತ್ತಿರುವಾಗ ಮನೆದೇವರಾದ ಜೆಟ್ಟಂಗರಾಯ ಕನಸ್ಸಿನಲ್ಲಿ ಬಂದು “ಅಷ್ಟಪುತ್ರರು ಆಗುತ್ತಾಯಿದ್ದಾರೆಂದು”ಹೇಳಿ ಹೋದರು. ನಂತರ ಗರ್ಭೋತ್ಪತ್ತಿಯಾಗಿ ಪ್ರತಿ ಸಂವತ್ಸರಕ್ಕೆ ಒಬ್ಬರಂತೆ ಏಳುಮಂದಿ ಜನಿಸುತ್ತಾರೆ (ಕರ್ನಾಟಕದ ಕೈಫಿಯತ್ತುಗಳು).

ಮುಂದೆ ಬೊಮ್ಮಂತರಾಜನು ತನ್ನ ಒಬ್ಬ ಮಗನಿಗೆ ಪಟ್ಟಗಟ್ಟಿದರೆ ದೇವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ದೇವರ ವರ ಪ್ರಸಾದದಿಂದ ಹುಟ್ಟಿದ ಏಳು ಮಂದಿಗೂ ಒಂದೊಂದು ತಾಲ್ಲೂಕುಗಳನ್ನು ದಳವಾರಿಕೆಗೆ ಕೊಡಬೇಕೆಂದು ನಿಶ್ಚಯಿಸಿ ಏಳೂ ತಾಲ್ಲೂಕುಗಳನ್ನು ಈ ಮುಂದಿನಂತೆ ಪಟ್ಟಗಟ್ಟುತ್ತಾನೆ. “1) ಹಿರಿಯ ಮಗ ಹಿರೆಬೊಮ್ಮಂತ ರಾಜನಿಗೆ ಕುತ್ತಾನೆ (ಕುಡಿತಿನಿ) ತಾಲ್ಲೂಕು. 2) ಎರಡನೇ ಮಗ ಬಿಸಾಳನಾಯಕನಿಗೆ ಸೊಂಡೂರು. 3) ಮೂರನೇ ಮಗ ರಾಜಪ್ಪ ನಾಯಕನಿಗೆ - ಬಾಣರಾವಿ (ಬಾಣಾಪುರ). 4) ನಾಲ್ಕನೆ ಮಗ ವೀರಪ್ಪ ನಾಯಕನಿಗೆ - ಉಜ್ಜನಿ. 5) ಐದನೆ ಮಗ ಯಿಮ್ಮಡಿ ನಾಯಕನಿಗೆ - ಗುಡೆಕೋಟೆ. 6) ಆರನೆ ಮಗ ಹಿರೆಮಲ್ಕರ್ಜಿನಾಯಕನಿಗೆ – ಜರಿಮಲೆ. 7) ಏಳನೆ ಮಗ ಚಿನ್ನಯ್ಯ ರಾಜನಿಗೆ – ವಡ್ಡು ದರೋಜಿ ತಾಲ್ಲೂಕುಗಳನ್ನು ಕೊಟ್ಟು ಅವರನ್ನು ನೇಮಿಸಿದನು. ತಾನು ಅಂದರೆ ಬೊಮ್ಮಂತರಾಜ ನಡುವಿನ ಮಗನಾದ ವೀರಪ್ಪನಾಯಕನ ಬಳಿ (ವುಜನಿ ಸೀಮೆಯಲ್ಲಿ) ವಾಸಮಾಡುತ್ತಾನೆ” ಎಂದು ಕರ್ನಾಟಕದ ಕೈಫಿಯತ್ತುಗಳು ತಿಳಿಸುತ್ತವೆ. ಆದರೆ ಇನ್ನೊಂದು ಕೈಫಿಯತ್ತಿನ ಪ್ರಕಾರ (ಶ್ರೀಕುಮಾರದೇವರ ಕ್ಷೇತ್ರದ) “ಯಿಮ್ಮಡಿರಾಜನಿಗೆ ವುಜನಿ ತಾಲ್ಲೂಕು ಕೊಟ್ಟನು”ಎಂದು ಉಲ್ಲೇಖಿತವಾಗಿದೆ. ಬೊಮ್ಮಂತರಾಜ ತನ್ನ ಜೀವಿತಾವಧಿಯ ಕೊನೆ ದಿನಗಳಲ್ಲಿ ವಾಸಿಸುವುದು ಉಜ್ಜನಿಯ ತನ್ನ ಮನೆದೇವರ ಸಾನಿಧ್ಯದಲ್ಲಿ. ಮರುಳಸಿದ್ಧಸ್ವಾಮಿಗೆ ನೇಮದಲ್ಲಿ ಶಿಖರಕ್ಕೆ ತೈಲ ಹಾಕಿಸುತ್ತೇನೆ ಎಂದುಕೊಂಡ. ಅಂತೆಯೇ ಪ್ರತಿ ವರ್ಷದ ತೈಲಾಭಿಷೇಕದ ಸಂದರ್ಭದಲ್ಲಿ ಆ ವಂಶಸ್ಥರು ತಂದ ತೈಲವೇ ಮೊದಲನೆಯದಾಗಿ ಸುರಿಯುತ್ತಾರೆ. ನಂತರ ಭಕ್ತಾದಿಗಳು ಕೊಟ್ಟ ತೈಲವನ್ನು ಸುರಿಯಲಾಗುತ್ತದೆ.


ಬಳ್ಳಾರಿಯಿಂದ 90 ಕಿ.ಮೀ., ಹೊಸಪೇಟೆಯಿಂದ 65 ಕಿ.ಮೀ., ದಾವಣಗೆರೆಯಿಂದ 70 ಕಿ.ಮೀ. ಮತ್ತು ಚಿತ್ರದುರ್ಗದಿಂದ 70 ಕಿ.ಮಿ. ದೂರದಲ್ಲಿರುವ ಉಜ್ಜಯಿನಿಯು ವೀರಶೈವ ಪಂಚಪೀಠಗಳಲ್ಲಿ ಪ್ರಮುಖವಾದುದಾಗಿದೆ. ಮಧ್ಯ ಪ್ರದೇಶದ ಕಾಳಿಂಗ ನಗರದ ಉಜ್ಜಯಿನಿಯು ಅಂದಿನ ಮುಸ್ಲಿಮರ ದಾಳಿಯಿಂದ ತತ್ತರಿಸಿಹೋಯಿತು. ವೀರಶೈವ ಧರ‍್ಮದ ಉಳಿವಿಗಾಗಿ ದಕ್ಷಿಣ ಭಾರತದ ಕಡೆಗೆ ಅಲ್ಲಿನ ಗುರುಗಳು ತಮ್ಮ ಶಿಷ್ಯರೊಂದಿಗೆ ಬಂದರು. ಈ ರೀತಿ ಉಜ್ಜಯಿನಿಗೆ ಆಗಮಿಸಿದ ಮಧ್ಯಪ್ರದೇಶದ ಗುರುಗಳು ಉಜ್ಜಯಿನಿಯಲ್ಲಿ ನೆಲೆನಿಂತು ಧರ‍್ಮ ಜಾಗೃತಿ ಕಾರ‍್ಯ ನಡೆಸುತ್ತಾರೆ. ಅಂದಿನಿಂದ ಉಜ್ಜಯಿನಿಯು ಕರ್ನಾಟಕ ಚರಿತ್ರೆಯಲ್ಲಿ ಹೊಸದೊಂದು ಅಧ್ಯಾಯಕ್ಕೆ ಕಾರಣವಾಯಿತು. ಈ ಚಾರಿತ್ರಿಕ ಮತ್ತು ಧಾರ‍್ಮಿಕ ಸ್ಥಳ ಇಂದಿಗೂ ತನ್ನ ಪಾವಿತ್ರ್ಯತೆ ಮತ್ತು ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡು ಬಂದಿದೆ.


ಸುಮಾರು 2500 ಮನೆಗಳನ್ನು ಹೊಂದಿರುವ ಉಜ್ಜಿಯಿನಿ ಹಿಂದೆ ಕೂಡ್ಲಿಗಿ ತಾಲೂಕಿಗೆ ಸೇರಿತ್ತು. ಈಗ ಕೊಟ್ಟೂರು ತಾಲೂಕು ಮತ್ತು ಹೋಬಳಿಗೆ ಸೇರಿದ ಗ್ರಾಮವಾಗಿದೆ. ಎಲ್ಲಾ ಜನಾಂಗದ ಜನರು ವಾಸಿಸುವ ಈ ಪುಣ್ಯಕ್ಷೇತ್ರ ಐತಿಹಾಸಿಕ ಮಹತ್ವ ಹೊಂದಿದ್ದರೂ ಆಧುನಿಕವಾಗಿ  ಜನರ ಸಂಪರ್ಕದಿಂದ ದೂರವಿದೆ. ಉಜ್ಜಯಿನಿಗೆ ಮೊದಲಿದ್ದ ಹೆಸರು ಕ್ಯಾತನಾಳು (ಇದು ಎಲ್ಲೂ ಉಲ್ಲೇಖವಿಲ್ಲ) ಜನರ ಮಾತಿನಲ್ಲಿ ಮರೆಯಾಗುತ್ತಿದೆ. ಕ್ರಿ.ಶ.1058ರಲ್ಲಿ ಮರುಳಾರಾಧ್ಯರು ಬಂದು ನೆಲಸಿದ ನಂತರ ಉಜ್ಜಯಿನಿಯಾಗಿರಬೇಕು. ಕ್ರಮೇಣ ಕ್ಯಾತನಾಳು ಹೆಸರು ಮಾಸಿ ಉಜ್ಜಯಿನಿಯಾಗಿದೆ. ಇಂದು ಜನಭಾಷೆಯಲ್ಲಿ ಸುಲಭತೆಯನ್ನು ಪಡೆದು ಉಜ್ಜನಿ, ಉಜ್ಜಿನಿ, ವುಜ್ನಿ ಎಂದೆಲ್ಲಾ ಬಳಕೆಯಾಗುತ್ತದೆ.

‘ಹಂಪೆಯ ಹೊರನೋಡು ಉಜ್ಜಯಿನಿಯ ಒಳನೋಡು’ಎಂಬ ನಾಣ್ಣುಡಿಯಿಂದಲೇ ಉಜ್ಜಯಿನಿಯ ಮರುಳಸಿದ್ಧೇಶ್ವರನ ದೇವಾಲಯದ ನವರಂಗದ ಸಹಸ್ರದಳ ಕಮಲವು ಇತಿಹಾಸ ಪ್ರಸಿದ್ಧವಾಗಿದೆ. ಛಾಯಾಚಿತ್ರ್ ಗಮನಿಸಬಹುದು.  ಈ ಕಮಲದಲ್ಲಿ ಅಷ್ಟದಿಕ್ಪಾಲಕರು, ಅವರ ವಾಹನಗಳು ಮತ್ತು ಸೂಕ್ಷ್ಮ ಕುಸುರಿಯ ಚಿತ್ರಗಳು ಕಾಣುತ್ತವೆ. ಇದೇ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಮೇಲೆ ಗೋಪುರವಿದೆ. ಈ ಗೋಪುರವು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ವೇಸರ ಶೈಲಿಯಲ್ಲಿ ನಿರ‍್ಮಾಣವಾದದ್ದಾಗಿದೆ.

ಉಜ್ಜಿನಿಯನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕ ಸಂಸ್ಕೃತಿಯ ಕೆಲ ಕುರುಹುಗಳನ್ನು ಅರಿಯಬಹುದು. ಕರ್ನಾಟಕದ ಸಂಸ್ಕೃತಿಗೆ ಉಜ್ಜಯಿನಿಯು ಕೊಟ್ಟ ಕೊಡುಗೆಯನ್ನು ಗಮನಿಸುವುದಾದರೆ ಮರುಳಸಿದ್ದೇಶ್ವರ ದೇವಸ್ಥಾನವು ಸುಂದರವಾದ ಪ್ರಾಂಗಣವನ್ನು ಹೊಂದಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಶೈಲಿಯಲ್ಲಿ ನಿರ‍್ಮಿತವಾಗಿದೆ. ನಂತರದ ಅರಸರಿಂದ ದಾನದತ್ತಿ ಪಡೆದುಕೊಂಡು ಬೆಳವಣಿಗೆ ಹೊಂದಿ ಪಂಚಕೂಟ ದೇವಾಲಯವಾದ ಇದು ದ್ವಾರಗೋಪುರ, ನಂದಿಮಂಟಪ, ಲಕ್ಷ್ಮಿಸ್ಥೂಪ, ಮಹಾಮಂಟಪ, ನವರಂಗ, ಸುಕನಾಸಿ ಮತ್ತು ಗರ್ಭಗೃಹಗಳನ್ನು ಒಳಗೊಂಡಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಲಕ್ಷ್ಮಿಸ್ಥೂಪ ಮತ್ತು ಸಹಸ್ರದಳ ಕಮಲ. ಕರ್ನಾಟಕದ ವಾಸ್ತು ಶಿಲ್ಪದಲ್ಲಿ ವಿಶೇಷವಾಗಿ ಕಾಣುವಂತಹ ನಿದರ್ಶನಗಳಾಗಿವೆ. ಭುವನೇಶ್ವರಿಯಲ್ಲಿರುವ ಸಹಸ್ರ ದಳ ಕಮಲ ಉಜ್ಜಯಿನಿಯ ಪ್ರಮುಖ ಆಕರ್ಷಣೆ. ಉಜ್ಜಯಿನಿಯ ಒಳನೋಟಕ್ಕೆ ಅಭೂತ ಪೂರ್ವ ಸಾಕ್ಷಿಯಾಗಿರುವ ಈ ಕಮಲ ಶಿಲ್ಪಿಯ ಕಲಾ ಕೌಶಲ್ಯವನ್ನು ಸ್ಪಷ್ಟಪಡಿಸುತ್ತದೆ. ಮೇಣವನ್ನು ಸೂಜಿಯಿಂದ ಕೆತ್ತುವಂತೆ ಕಲ್ಲನ್ನು ಸೂಕ್ಷ್ಮವಾಗಿ ಕೆತ್ತಿ ಸುಂದರ ಶಿಲ್ಪವನ್ನು ನಿರ‍್ಮಿಸಿದ್ದಾನೆ ಶಿಲ್ಪಿ. ಅಷ್ಟದಿಕ್ಪಾಲಕರು ಅವರೊಂದಿಗೆ ಸುಂದರ ಲತೆಗಳು ಹಾಗೂ ಚಂದದ ವಿಗ್ರಹಗಳನ್ನು ಇದರಲ್ಲಿ ಕಾಣಬಹುದಾಗಿದೆ. ಇದನ್ನು ನೋಡುತ್ತಿರುವಾಗ ಕಲ್ಲಿನಲ್ಲಿ ಮೂಡಿರುವ ಶಿಲ್ಪವೇ ಇದು! ಎಂಬ ಅಚ್ಚರಿ. ಹಂಪೆಯ ಇಡೀ ಪರಿಸರವೇ ಹೊರನೋಟಕ್ಕೆ ಕಾರಣವಾದರೆ ಇದೊಂದೆ ಶಿಲ್ಪ ಉಜ್ಜಯಿನಿಯ ಒಳನೋಟಕ್ಕೆ ಹೆಸರಾಗಿದೆ.

‘ಹಂಪೆಯ ಹೊರನೋಡು ಉಜ್ಜಯಿನಿ ಒಳನೋಡು’ಈ ನಾಣ್ಣುಡಿ ಎರಡು ದೃಷ್ಟಿಗಳಿಂದ ಬಳಕೆಯಾಗಿದೆ. ಸಾಮಾನ್ಯ ಅರ್ಥದಲ್ಲಿ ದೇವಸ್ಥಾನದ ನವರಂಗದ ಭುವನೇಶ್ವರಿಯಲ್ಲಿ ಸಹಸ್ರದಳ ಕಮಲ ಹಾಗು ಮೂರ್ತಿಗಳನ್ನು ಕೇಂದ್ರೀಕರಿಸುತ್ತದೆ. ಆದರೆ ಅಂತರ್ ದೃಷ್ಟಿಯ ನೋಟದಲ್ಲಿ ಹಂಪೆಯು ಮಾನವನ ಬಾಹ್ಯ ಚಟುವಟಿಕೆಗಳನ್ನು ಹೋಲುತ್ತದೆ. ಆದರೆ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ದೇವಸ್ಥಾನವು ಸಂಪೂರ್ಣವಾಗಿ ಮಾನವ ದೇಹವನ್ನು ಹೋಲುತ್ತದೆ. ಶಿಖರ ಭಾಗದಿಂದ ಹಿಡಿದು ಪಾದಗಳವರೆಗೆ ನಿರೂಪಗೊಂಡಿರುವ ಈ ದೇವಸ್ಥಾನವು ದೇಹವೇ ದೇಗುಲದ ಕಲ್ಪನೆಯನ್ನು ಮತ್ತೊಂದು ರೀತಿಯಲ್ಲಿ ಸಾಕಾರಗೊಳಿಸುತ್ತದೆ.


ದೇಹದಲ್ಲಿ ಪ್ರಮುಖ ಅಂಗ ಶಿರ ಮತ್ತು ಮೆದುಳು. ಈ ಶಿರ ಮತ್ತು ಮೆದುಳನ್ನು ಶಿಖರ ಮತ್ತು ಗರ್ಭಗುಡಿಯ ಶ್ರೀಮೂರ್ತಿಗಳು ಪ್ರತಿನಿಧಿಸುತ್ತವೆ. ಶಿಖರಕ್ಕೆ ಅರ್ಪಿಸುವ ತೈಲವು ತಲೆಗೆ ಎಣ್ಣೆ ಹಚ್ಚುವ ಕ್ರಿಯೆಯನ್ನು ಮೆದುಳು ತಂಪಿರಬೇಕೆಂಬ ನಂಬಿಕೆಯನ್ನು ಸೂಚಿಸುತ್ತದೆ. ಕಾರ‍್ಯನಿರತ ಕೈಗಳನ್ನು ಅಕ್ಕ-ಪಕ್ಕದ ಗರ್ಭಗುಡಿಗಳು ಪ್ರತಿನಿಧಿಸಿದರೆ ಪಾದುಕೆಗಳು ಪಾದಗಳನ್ನು ಪ್ರಸ್ತುತ ಪಡಿಸುತ್ತವೆ. ದೇಹದಲ್ಲಿ ಭಾವುಕ, ಪ್ರಜ್ಞಾವಂತ ಹಾಗೂ ಶಾಂತತೆಯು ಸ್ಥಳವಾದ ಹೃದಯವನ್ನು ಸಹಸ್ರದಳ ಕಮಲ ಪ್ರತಿನಿಧಿಸುತ್ತದೆ. ಇಂತಹ ಸೂಕ್ಷ್ಮ ಹಾಗೂ ಆಧ್ಯಾತ್ಮದ ಪರಿಕಲ್ಪನೆಯ ನೆಲೆಯಲ್ಲಿ ರಚನೆಗೊಂಡಿರುವ ದೇವಸ್ಥಾನ ಕರ್ನಾಟಕದಲ್ಲಿಯೇ ವಿಶಿಷ್ಟವೆಂದರೆ ಅತಿಶಯೋಕ್ತಿಯಲ್ಲ.


ಗರ್ಭಗುಡಿಯು ಮೂಲಮೂರ್ತಿಯನ್ನು ಹೊಂದಿದೆ ಗರ್ಭಗುಡಿಯ ಮೇಲಿರುವುದೇ ಶಿಖರ. ದ್ವಾರದ ಗೋಪುರ ಮತ್ತು ಗರ್ಭಗೃಹದ ಶಿಖರ ಭಿನ್ನವಾಗಿವೆ. ದ್ರಾವಿಡ ಮತ್ತು ವೇಸರ ಶೈಲಿಯ ಗೋಪುರ ಆಕರ್ಷಕವಾಗಿದೆ. ಈ ಶಿಖರಕ್ಕೆ ಪ್ರತಿ ವರ್ಷ ಅಕ್ಷಯ ಷಷ್ಠಿ ದಿನದಂದು ತೈಲಾಭಿಷೇಕ ಮಾಡಲಾಗುತ್ತದೆ. ಇದಕ್ಕಿರುವ ಚರಿತ್ರೆ ಎಂದರೆ ಜರಿಮಲೆ ಪಾಳೇಗಾರರು ತನ್ನ ಅದಿದೈವ ಮರುಳಸಿದ್ದೇಶ್ವರನಿಗೆ ಪ್ರತಿವರ್ಷ ತೈಲಾಭಿಷೇಕದ ಮೊದಲ ತೈಲವನ್ನು ಅವರೇ ಭಕ್ತಿಯಿಂದ ಅರ್ಪಿಸುತ್ತಾರೆ. ಇದಕ್ಕೆ ಅವರ ಮೇಲೆ ಮರುಳಸಿದ್ದೇಶ್ವರನ ಶಾಪವಿರುವುದಾಗಿಯೂ ಆ ಶಾಪ ವಿಮೋಚನೆಗೆ ತೈಲ ನೀಡುತ್ತಿರುವ ಐತಿಹ್ಯವಿದೆ. ಪಾಳೆಯಗಾರ ಬೇಟೆಗೆ ಹೋದಾಗ ಈಗಿನ ಉಜ್ಜಯಿನಿಯ ದೇವಾಲಯವು ಅಡವಿಯಾಗಿತ್ತು. ಪೊದೆಯೊಂದರಲ್ಲಿ ಅಡಗಿದ್ದ ಬಿಳಿಹಂದಿಯನ್ನು ಬೇಟೆಯಾಡಲು ಬಾಣ ಹೂಡಿ ಹೊಡೆದ. ಆ ಬಾಣ ಅದೇ ಪೊದೆಯೊಳಗಿದ್ದ ಋಷಿವರ‍್ಯರಿಗೆ ನಾಟಿತು. ಆ ಋಷಿವರ‍್ಯರೇ ಮರುಳಾರಾಧ್ಯರು. ಅವರಲ್ಲಿ ಕ್ಷಮೆ ಕೋರಿ, ಅವರ ತಲೆಗೆ ಎಣ್ಣೆ ಹಚ್ಚಿ ತಂಪು ಮಾಡಿದ. ಅಂದಿನಿಂದ ಧಡಿ ಎಣ್ಣೆ ಕಳಿಸುತ್ತೇನೆಂದು ತಿಳಿಸಿದ್ದಾರೆಂಬ ಐತಿಹ್ಯ ಒಂದೆಡೆ ಇದೆ.

ಇನ್ನೊಂದೆಡೆ ಜರಿಮಲೆ ಪಾಳೆಗಾರರು ಹೈದರಾಲಿಯ ಸಂಬಂಧಿ ಹೆಂಗಸೊಬ್ಬಳನ್ನು ಅಪಹರಿಸಿ ಉಜ್ಜಯಿನಿಯ ಮಠದಲ್ಲಿ ಇಟ್ಟರು. ಹೆಣ್ಣನ್ನು ಅಪಹರಿಸಿ ಮಠದಲ್ಲಿ ಬಂಧಿಸಿದ ಕಾರಣವಾಗಿ ಗುರುಗಳು ಕುಪಿತರಾಗಿ “ನನ್ನ ದರುಶನಕ್ಕೆ ವಂಶ ಪಾರಂಪರ‍್ಯವಾಗಿ ಬರಕೂಡದು”ಎಂದು ಶಾಪಗೈದರು. ಹೀಗಾಗಿ ಅವರು ದರುಶನ ಪಡೆಯುವಂತಿಲ್ಲ. ತನ್ನ ತಪ್ಪಿನ ಅರಿವಾಗಿ ಪಾಳೇಗಾರರು ಪ್ರತಿವರ್ಷ ಶಿಖರಕ್ಕೆ ತೈಲ ಕಳುಹಿಸುತ್ತೇನೆಂದು ಹೇಳಿ ಅದರಂತೆ ನಡೆದುಕೊಳ್ಳುತ್ತಿದ್ದಾರೆ.

ಈ ಕಥೆ-ಶಾಪಗಳೇನೆ ಇರಲಿ, ಇಂತಹ ಪರಂಪರೆಯು ಆದ್ಯಂತವಾಗಿ ನಡೆದುಕೊಂಡು ಬಂದಿರುವುದು ಗಮನಾರ್ಹ. ಭಾರತದಲ್ಲಿ ಮೂರ್ತಿಗಳಿಗೆ ತೈಲಾಭಿಷೇಕ ಮಾಡುತ್ತಿರುವ ವಾಡಿಕೆಗಳಿವೆ. ಆದರೆ ಗರ್ಭಗೃಹದ ಇಡೀ ಶಿಖರಕ್ಕೆ ತೈಲಾಭಿಷೇಕ ಮಾಡುತ್ತಿರುವುದು ಭಕ್ತಿಯ ಪರಾಕಾಷ್ಠತೆಯಲ್ಲದೆ ಮತ್ತೇನೂ ಅಲ್ಲ. ಈ ತೈಲಾಭಿಷೇಕದಿಂದಾಗಿ ಶಿಖರದಲ್ಲಿರುವ ಸೂಕ್ಷ್ಮ ಕೆತ್ತನೆ ಕಾಣದಾಗಿದೆ. ಇದು ವಾಸ್ತುಶಿಲ್ಪವನ್ನು ಮುಚ್ಚಿಟ್ಟಂತಾಗಿದೆ. ಚಾಲುಕ್ಯರ ಕಾಲದಿಂದ ಆರಂಭವಾಗಿ ಯಾದವ, ವಿಜಯನಗರ ಅರಸರ ಕಾಲದಲ್ಲಿ (ದಾನದತ್ತಿ) ಪಡೆದುಕೊಂಡು ಅಭಿವೃದ್ಧಿ ಹೊಂದುತ್ತಾ ಬಂದಿದೆ. ಕರ್ನಾಟಕ ಶಿಲ್ಪಕಲೆಯಲ್ಲಿ ವೈಭವವನ್ನು ಸಾರಬಹುದಾದ ಈ ದೇವಾಲಯ ತೈಲಾಭಿಷೇಕವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.

ಪಂಚಪೀಠದ ಪರಂಪರೆಯ ಗುರುವರ್ಗದ ಮಠಗಳಲ್ಲಿ ಉಜ್ಜಯಿನಿ ಪೀಠವು ಎರಡನೆಯದಾಗಿದೆ. ಪರಶಿವನ ಐದು ಮುಖಗಳಲ್ಲಿ ಎರಡನೆಯ ಮುಖದಿಂದ ಆವಿರ್ಭಾವವಾದ ಪೀಠ. ಈ ಪೀಠವು ದೇಶದಾದ್ಯಂತ 28000 ಶಾಖಾ ಮಠಗಳನ್ನು ಹೊಂದಿತ್ತು. ಅವುಗಳಲ್ಲಿ ಈಗ 6000 ಮಠಗಳು ಮಾತ್ರ ಅಸ್ತಿತ್ವದಲ್ಲಿವೆ. ಪಂಚಪೀಠಗಳ ಪೀಠಾಚಾರ್ಯರು ಸಮಸ್ತ ವೀರಶೈವ ಧಾರ‍್ಮಿಕ ಸಾಮ್ರಾಜ್ಯದ ಅಧಿಪತಿಗಳು, ಧಾರ‍್ಮಿಕ ವಿಧಿ-ವಿಧಾನಗಳ ನಿರ್ಮಾತೃಗಳು. ಗೋತ್ರ-ಸ್ತೋತ್ರಗಳ ಆರಂಭಕಾರರು. ಸೃಷ್ಠಿಯ ಆದಿ ಅಂತ್ಯಗಳ ಕರ್ತರು. ಇಂತಹ ಆಚಾರ‍್ಯರಿಗೆ ಐದು ಉಪಾಚಾರ‍್ಯರಿದ್ದಾರೆ. ಅವರನ್ನು ಪಂಚಾವೃತ್ಯಾಚಾರ್ಯರೆಂದು ಕರೆಯುತ್ತಾರೆ. ಪರಶಿವನ ಐದು ಮುಖಗಳಿಂದ ಆಚಾರ‍್ಯರು ಉದಿಸಿದಂತೆ ಶಿವನ ಬೇರೆ ಬೇರೆ ಐದು ಅಂಗಗಳಿಂದ ಪಂಚಾಚಾರ‍್ಯರ ಸಹಾಯಕ್ಕಾಗಿ ಪಂಚಾವೃತ್ಯಾಚಾರ‍್ಯರು ಉದಿಸಿದ ನಂಬಿಕೆಯಿದೆ. ಪಂಚಪೀಠಗಳಲ್ಲಿ ಉಜ್ಜಯಿನಿ ಮತ್ತು ಬಾಳೆಹಳ್ಳಿ (ಬಾಳೆಹೊನ್ನೂರು) ಮಾತ್ರ ಕರ್ನಾಟಕದಲ್ಲಿವೆ. ಹಿಮವತ್ ಕೇದಾರ-ಹಿಮಾಲಯ, ಕಾಶಿ-ಉತ್ತರ ಪ್ರದೇಶ ಹಾಗೂ ಶ್ರೀಶೈಲ-ಆಂಧ್ರಪ್ರದೇಶ ರಾಜ್ಯಗಳಲ್ಲಿವೆ. ಇ. ಥರ್ಸ್ಟಸ್ ಎನ್ನುವ ವಿದ್ವಾಂಸರು “ಈ ಐವರು ಮಹಾಗೋತ್ರ ಕರ್ತರು ಭರತ ಖಂಡದ ಬೇರೆ ಬೇರೆ ಭಾಗಗಳಲ್ಲಿ ಐದು ದೊಡ್ಡ ಮಠಗಳನ್ನು ಸ್ಥಾಪಿಸಿದರು, ಇವು ಸಿಂಹಾಸನದ ಮಠಗಳೆಂದು ಕರೆಯಲ್ಪಡುತ್ತವೆ” (Castes and tribes of Southern India)  ಎಂದಿದ್ದಾರೆ. ಪ್ರತಿ ವರ್ಷ ಅಕ್ಷತ್ತದಗಿ ಅಮವಾಸೆಯ ಐದನೇ ದಿನ (ವೈಶಾಖ ಶುದ್ಧ ಪಂಚಮಿ ದಿನ), ದಾರುಕಾಚಾರ‍್ಯರ ಜಯಂತಿಯ ದಿನದಂದು ಮರುಳಸಿದ್ದೇಶ್ವರನ ರಥೋತ್ಸವ ಜರುಗುತ್ತದೆ. ಈ ರಥೋತ್ಸವ ಎನ್ನಿಸಿಕೊಳ್ಳುವುದು ಒಂದು ನಿಟ್ಟಿನಲ್ಲಿ ಮಾತ್ರ. ಆದರೆ ಇದರ ಹಿಂದಿನ ಉದ್ದೇಶವೇ ಬೇರೆ. ಅದೆಂದರೆ, ಶ್ರೀ ಮರುಳಸಿದ್ದೇಶ್ವರ ಹಾಗೂ ಶ್ರೀಗೌರಿಯ ವಿವಾಹ ಮಹೋತ್ಸವ ಸಂದರ್ಭ. ರಥೋತ್ಸವದ ಐದು ದಿನಗಳ ಮೊದಲು ಕಂಕಣ ಕಟ್ಟುವಿಕೆ ಪ್ರಕ್ರಿಯೆ ನಡೆಯುತ್ತದೆ. ನಂತರದ ದಿನ ಮದು-ಮಗನಾಗುವುದು ಈ ಎರಡು ಕ್ರಿಯೆಗಳು ಹಿಂದೂ ಸಂಪ್ರದಾಯದ ಮದುವೆಯ ಆಚರಣೆಗಳಾಗಿವೆ. ಕಂಕಣ ಬಿಚ್ಚುವ ಕಾರ‍್ಯವೂ ಇಲ್ಲಿ ನಡೆಯುತ್ತದೆ. ಐದು ದಿನಗಳ ಕಾಲ ಮಹೋತ್ಸವಗಳು ಜರುಗುತ್ತವೆ. ಹೀಗಾಗಿ ಇದೊಂದು ದೇವರ ವಿವಾಹ ಕಾರ‍್ಯವೇ ಸರಿ.

ಉಜ್ಜಯಿನಿಯ ಅಧಿಪತಿ ಎನಿಸಿಕೊಂಡಿರುವ ಶ್ರೀ ಮರುಳ ಸಿದ್ಧೇಶ್ವರನ ರಥೋತ್ಸವ ಮತ್ತು ಜಾತ್ರೆ ವೀರಶೈವ ಪರಂಪರೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಈ ರಥೋತ್ಸವವು 2 ಪರಿಕಲ್ಪನೆಗಳನ್ನು ಮೂಡಿಸುತ್ತದೆ. ಒಂದು ಮದುವೆಯ ಸಂದರ್ಭ, ಮತ್ತೊಂದು ಜಾತ್ರಾ ಮಹೋತ್ಸವ. ಒಂದನೆಯದನ್ನು ತಿಳಿಯುವುದಾದರೆ ಮರುಳಸಿದ್ಧನ ದೇವಸ್ಥಾನದ ಪಕ್ಕದಲ್ಲಿ ಗೌರಮ್ಮ ದೇವಿಯ ದೇವಾಲಯವಿದೆ. ಮರುಳಸಿದ್ಧೇಶ್ವರನಿಗೂ ಗೌರಮ್ಮ ದೇವಿಗೂ ನಡೆಯುವ ವಿವಾಹ ಸಂದರ್ಭವೆಂದು ಕಲ್ಪಿಸುತ್ತಾರೆ. ರಥೋತ್ಸವದ ದಿನ ರಾತ್ರಿಯ ಕಾರ‍್ಯಕ್ರಮಗಳು ಇದನ್ನು ಸಾಕ್ಷೀಕರಿಸುತ್ತವೆ. ನಂತರದ ದಿನ ಗರ್ಭಗುಡಿಯ ಮೇಲಿರುವ ಕಪ್ಪು ಶಿಖರಕ್ಕೆ ತೈಲಾಭಿಷೇಕ ಕಾರ‍್ಯಕ್ರಮ ಜರುಗುತ್ತದೆ.

ವೈಶಾಖ ಶುದ್ಧ ಷಷ್ಠಿ ಅಥವಾ ರಥೋತ್ಸವದ ನಂತರದ ದಿನ ಮರುಳಸಿದ್ಧೇಶ್ವರನ ಗರ್ಭಗೃಹದ ಶಿಖರಕ್ಕೆ ‘ತೈಲಾಭಿಷೇಕ’ ನಡೆಯುತ್ತದೆ. ಉಜ್ಜಯಿನಿ ಭಕ್ತ ಪರಂಪರೆಯ ಹಾಗೂ ಗುರುಗಳ ಶಾಪಕ್ಕೆ ತುತ್ತಾದ ಜರಿಮಲೆ ಪಾಳೇಗಾರನ ಭಕ್ತಿಯ ತೈಲದಿಂದ ಮೊದಲ್ಗೊಂಡು ನಂತರ ಭಕ್ತರು ಕೊಟ್ಟ ತೈಲವನ್ನು ಇಡೀ ಶಿಖರಕ್ಕೆ ಧಾರೆಯೆರೆಯುತ್ತಾರೆ. ಈ ಸುಂದರ ಹಾಗೂ ಭಕ್ತಿಯ ಆಚರಣೆಯನ್ನು ನೋಡಲು ಸಾವಿರಾರು ಭಕ್ತರು ನೆರೆದಿರುತ್ತಾರೆ. ಊರಿನ ಜನತೆ ಹಾಗೂ ಬಂಧು-ಬಳಗದವರು ತಮ್ಮ ತಮ್ಮ ಮನೆಗಳ ಮೇಲೆ ನಿಂತೇ ವೀಕ್ಷಿಸುತ್ತಾರೆ. ಕರ್ನಾಟಕದ ಇತಿಹಾಸದ ಮಟ್ಟಿಗೆ ತೈಲಾಭಿಷೇಕವನ್ನು ಮೂರ್ತಿಗಳಿಗೆ ಮಾಡುವುದನ್ನು ತಿಳಿದಿದ್ದೇವೆ. ಅದು 12 ವರ್ಷಕ್ಕೊಮ್ಮೆಯಂತೆ ಶ್ರವಣ ಬೆಳಗೊಳದ ಗೊಮ್ಮಟನಿಗೆ ನಡೆಯುವ ಮಹಾಮಸ್ತಕಾಭಿಷೇಕ ಇರಬಹುದು. ಅಥವಾ ಇನ್ನಾವುದೇ ಗರ್ಭಗುಡಿಯ ಮೂರ್ತಿಗೆ ವಿಶೇಷ ಪೂಜಾ ಸಮಾರಂಭಗಳಂದು ಕ್ಷೀರ, ತೈಲ ಇತ್ಯಾದಿ ಅಭಿಷೇಕಗಳಿರಬಹುದು. ಆದರೆ ಗರ್ಭಗುಡಿಯ ಇಡೀ ಶಿಖರಕ್ಕೆ ಅದು ಪ್ರತಿವರ್ಷವೂ ಆಚರಿಸಲ್ಪಡುವ ಈ ಕ್ರಿಯೆ ಉಜ್ಜಯಿನಿಯಲ್ಲಿ ಮಾತ್ರ. ಇದು ನಿಜಕ್ಕೂ ವಿಭಿನ್ನ ಮತ್ತು ವಿಶಿಷ್ಠವೇ ಸರಿ.


ಕರ್ನಾಟಕದ ಇತಿಹಾಸದಲ್ಲಿಯೇ ಒಂದು ಮಹತ್ತ್ರ ಧಾರ‍್ಮಿಕ ಕ್ರಿಯೆ ನಡೆಯುತ್ತಿರುವುದು ಹೆಮ್ಮೆಯೇ ಸರಿ. ಇದು ಭಾರತದಲ್ಲಿ ಅಷ್ಟೆ ಅಲ್ಲ, ಏಷ್ಯಾ ಖಂಡದಲ್ಲಿಯೇ ಇಂತಹ ವೈಭವ ಪೂರ್ಣವಾದ ಮತ್ತು ವೈಶಿಷ್ಠಪೂರ್ಣವಾದ ಆಚರಣೆ ಇಲ್ಲ. ಈ ಆಚರಣೆ ಶಿಲ್ಪವೈಭವವನ್ನು ಕಳೆಗುಂದಿಸುತ್ತದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಸುಂದರ ಬಳಪದ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಶಿಖರದ ಸ್ತೂಪಿ, ಮಹಾಸುಕನಾಸಿ, ಕೋಷ್ಟಕ ಕಂಬ, ಗೂಡು, ಅಧಿಷ್ಠಾನದ ಕೆತ್ತನೆ ಮತ್ತು ಮೂರ್ತಿಗಳು ತಮ್ಮ ಸುಂದರತೆಯನ್ನು ಹೊಂದಿವೆ. ಇಲ್ಲಿರುವ ಶಿಲ್ಪವೈಭವ ಎಣ್ಣೆ ಮಜ್ಜನದೊಂದಿಗೆ ಧೂಳಿನ ಲೇಪವೂ ಸೇರಿದೆ ಎಂಬುದು ನಿಜ. ಆದರೆ ಇಲ್ಲಿನ ಪರಂಪರೆಯ ಹಾಗೂ ಭಕ್ತಿಯ ಪರಾಕಾಷ್ಠತೆಯಲ್ಲಿ ಅದು ಮರೆ ಮಾಚಿದೆ.

ವಿಜೃಂಭಣೆಯ ಶ್ರೀಮರುಳಸಿದ್ಧೇಶ್ವರನ ರಥೋತ್ಸವ ನಾಡಿನಾದ್ಯಂತ ಹೆಸರಾಗಿದೆ. ಬಾಹ್ಯದಲ್ಲಿ ಐದು ದಿನಗಳ ಕಾಲ ನಡೆಯುವ ಈ ರಥೋತ್ಸವ ಆಂತರ‍್ಯದಲ್ಲಿ ಸುಮಾರು 21 ದಿನಗಳ ಕಾಲದ ಆಚರಣೆಯನ್ನು ಹೊಂದಿದೆ. ರಥದ ಗಾಲಿ ಹೊರಹಾಕುವ ಕ್ರಿಯೆಯಿಂದ ಆರಂಭವಾಗಿ ಕಂಕಣ ವಿಸರ್ಜನೆಯವರೆಗೆ ಈ ಧಾರ‍್ಮಿಕ ಕ್ರಿಯಾ ವಿಧಿಗಳು ನಿರಂತರವಾಗಿ ನಡೆಯುತ್ತವೆ. ಕಂಕಣ ಕಟ್ಟುವಿಕೆಯವರೆಗೆ ಅಂತಹ ಮಹತ್ವದ ಆಚರಣೆಗಳಿಲ್ಲ. ಈ ಕಂಕಣ ಕಟ್ಟುವಿಕೆಯು ಹಿಂದೂ ಸಂಪ್ರದಾಯದ ಜನರ ಮದುವೆಗಳಲ್ಲಿ ನಡೆಯುವ ಧಾರ‍್ಮಿಕ ಕ್ರಿಯ ವಿಧಿ ಇಂತಹ ಕ್ರಿಯೆಯು ದೇವರಿಗೂ ಸಾಮಿಪ್ಯಿಸಿರುವುದು ಗಮನಾರ್ಹ.

ಮರುಳಸಿದ್ಧೇಶ್ವರ ತನ್ನ ಕ್ಷೇತ್ರದ ದರ್ಶನವನ್ನರಸಿ ಬರುವ ಯಾತ್ರಾರ್ಥಿಗಳಿಗೆ ದರ್ಶನದೊಂದಿಗೆ ಪ್ರಸಾದವನ್ನು ವಿತರಿಸುವ ನಿತ್ಯಾನ್ನಕ್ಷೇತ್ರವಾಗಿ ಪರಿಣಮಿಸಿರುವ ಹಾಗೂ ದೂರದ ಯಾತ್ರಿಗಳಿಗೆ ವಸತಿ ಸೌಲಭ್ಯವೂ ಇದೆ. ಕನ್ನಡ ನಾಡಿನಲ್ಲಿ ಅಮರ ಶಿಲ್ಪಿ ಜಕ್ಕಣಾಚಾರ‍್ಯ ಕಟ್ಟಿದ ದೇವಾಲಯಗಳು ಅದೆಷ್ಟೋ. ಎಲ್ಲೂ ಇಲ್ಲದ ಜಕಣ್ಣಾಚಾರ‍್ಯನ ಆತನ ಪ್ರತಿಮೆ ಇಲ್ಲಿದೆ. ಕರ್ನಾಟಕದಲ್ಲಿ ಆಳಲ್ಪಟ್ಟ ಚಾಲುಕ್ಯ, ಹೊಯ್ಸಳ ಮತ್ತು ವಿಜಯ ನಗರದ ಅರಸರುಗಳ ಕಾಲದಲ್ಲಿ ವೈಭವವಾಗಿ ಉಜ್ಜಯಿನಿ ಮೆರೆದಿದೆ.

ಈ ಪೀಠದಲ್ಲಿ ಧಾರ‍್ಮಿಕ ನ್ಯಾಯಾಲಯವಿತ್ತು. ಇದು ಬ್ರಿಟಿಷರ ಪೂರ್ವದಿಂದಲೂ ಧಾರ‍್ಮಿಕ ಸಂಬಂಧೀ ವ್ಯಾಜ್ಯಗಳಿಗೆ ತೀರ್ಪು ನೀಡುತ್ತಾ ಬಂದಿತ್ತು. ಮೌಖಿಕ ಸಂಹಿತೆ ಮತ್ತು ಸಂವಿಧಾನದ ರೂಪದಲ್ಲಿದ್ದ ಜಗದ್ಗುರುಗಳ ತೀರ್ಪು ಶಾಸನದಷ್ಟೆ ಶಾಶ್ವತ ಎಂಬುದನ್ನು ಬ್ರಿಟಿಷ್ ಸರ್ಕಾರವೇ ಮಾನ್ಯ ಮಾಡಿದೆ. ನ್ಯಾಯ ಪೀಠದ ಬಳಕೆ ಈಗಿಲ್ಲವಾದರೂ ಈ ಮೊದಲು ಬಳಕೆಯಲ್ಲಿತ್ತು. ಮುಖ್ಯ ನ್ಯಾಯಾಧೀಶರಾದ ಶ್ರೀಗಳು ಮುಖ್ಯ ಆಸನದಲ್ಲಿ ಆಸೀನರಾಗಿರುತ್ತಿದ್ದರು. ಈ ನ್ಯಾಯ ಪೀಠದಿಂದ ಧರ್ಮ ಸಂಬಂಧಿ ವ್ಯಾಜ್ಯಗಳಿಗೆ, ಶಾಖಾಮಠ, ಮಠದಯ್ಯ ಹಾಗೂ ಗ್ರಾಮಗಳ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಸದ್ಧರ್ಮ ಪೀಠದ ಈ ನ್ಯಾಯ ಪೀಠ ಧಾರ‍್ಮಿಕ ಸಮಸ್ಯೆಗಳನ್ನು ಇತ್ಯರ್ಥ ಮಾಡುತ್ತಿದ್ದುದರಿಂದ ಸದ್ಧರ್ಮ ಪೀಠವಾಗಿತ್ತು. ಈ ನ್ಯಾಯಪೀಠವನ್ನು ಮುಂದುವರಿಸುವ ಸದಿಚ್ಛೆ ಈಗಿನ ಶ್ರೀಗಳದ್ದಾಗಿದೆ.


ಕರ್ನಾಟಕದ ವಾಸ್ತುಶಿಲ್ಪ ಚರಿತ್ರೆಯಲ್ಲಿ ಈಗಾಗಲೇ ದಾಖಲಾಗಬೇಕಾಗಿದ್ದ ಉಜ್ಜಯಿನಿ ಇನ್ನೂ ದಾಖಲಾಗದಿರುವುದು ಸಂಶೋಧಕರ ನಿರಾಸಕ್ತಿ ಕಾರಣ. ಸುಂದರ ಕಪ್ಪು ಶಿಖರ, ನಂದಿ, ಸಹಸ್ರದಳ ಕಮಲಗಳು ಮುಗಿಲೆತ್ತರಕ್ಕೆ ನಿಂತ ಗೊಮ್ಮಟೇಶ್ವರನಷ್ಟೆ ಪ್ರಸಿದ್ಧ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ ನಂದಿ ಮತ್ತು ಕಮಲಗಳು ಶಿಲ್ಪಶ್ರೇಷ್ಠವಾಗಿವೆ. ಐತಿಹಾಸಿಕ ಶಿಖರ ತೈಲಾಭಿಷೇಕ ವಿಶಿಷ್ಠ ಆಚರಣೆಯನ್ನು ನೋಡುವುದೇ  ಒಂದು ಸಡಗರ...

ಶಂಕರ್ ಹಿರೇಮಠ (9741948813)

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು